ವಾಯುಮಂಡಲದ ಒತ್ತಡ

ಪರಿಚಯ

  1. ಗಾಳಿಯು ಅದರ ತೂಕದ ಕಾರಣದಿಂದಾಗಿ ಒತ್ತಡವನ್ನು ಉಂಟುಮಾಡುತ್ತದೆ.
  2. ಗಾಳಿಯ ತೂಕ ಅಥವಾ ಒತ್ತಡವನ್ನು ವಾಯುಮಂಡಲದ ಒತ್ತಡ ಎಂದು ಕರೆಯಲಾಗುತ್ತದೆ.
  3. ಭೂಮಿಯ ಗುರುತ್ವಾಕರ್ಷಣೆಯಿಂದ ಭೂಮಿಯು ವಾತಾವರಣವನ್ನು ಹಿಡಿದಿಡುತ್ತದೆ.
  4. ವಾಯುಮಂಡಲದ ಒತ್ತಡವು ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ವ್ಯತ್ಯಾಸಹೊಂದುವುದು. ವಾಯುವಿನ ಒತ್ತಡವು ಎಲ್ಲಾ ಜೀವಿಗಳ ಮೇಲೆ ಪ್ರಭಾವ ಬೀರುವುದರೊಂದಿಗೆ ಇದು ಮಾರುತಗಳ ಚಲನೆ ಮತ್ತು ಮಳೆಯ ಮೇಲೆ ಪ್ರಮುಖ ಪಾತ್ರವಹಿಸುತ್ತದೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹವಾಮಾನ ಮತ್ತು ವಾಯುಗುಣದ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತದೆ.
  5. ವಾಯುಮಂಡಲದ ಒತ್ತಡವನ್ನು ವಾಯುಭಾರಮಾಪಕ (Barometer) ಎಂಬ ಉಪಕರಣದಿಂದ ಅಳೆಯಲಾಗುತ್ತದೆ. ಪಾದರಸ, ಅನರಾಯಿಡ್ ಮತ್ತು ಡಿಜಿಟಲ್ ವಾಯುಭಾರಮಾಪಕಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
  6. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರಮಟ್ಟದಲ್ಲಿ ಸುಮಾರು 1013.25 ಮಿಲಿಬಾರ್  (ಎಂ.ಬಿ.) ಇರುತ್ತದೆ.

ವಾಯು ಮಂಡಲದ ಒತ್ತಡದ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು

  1. ವಾಯು ಮಂಡಲದ ಒತ್ತಡದ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು
  2. ವಿವಿಧ ಅಂಶಗಳಿಂದ ವಾಯುಮಂಡಲದ ಒತ್ತಡದ ಹಂಚಿಕೆಯನ್ನು ನಿರ್ಧರಿಸಲಾಗುತ್ತದೆ. ಪ್ರಮುಖವಾದ ಆಂಶಗಳೆಂದರೆ,

ಎತ್ತರ (Altitude)

  • ವಾಯುಮಂಡಲದಲ್ಲಿ ವಾಯುವಿನ ಕಣುಗಳು ಭೂಮಿಯ ಗುರುತ್ವ ಬಲದಿಂದ ಭೂಮಿಯ ಮೇಲ್ಬಾಗದಲ್ಲಿ ಕಂಡುಬರುತ್ತವೆ. ವಾಯುಮಂಡಲದ ಅತ್ಯಂತ ಕೆಳಪದರು ದಟ್ಟವಾಗಿದ್ದು, ಈ ಸ್ವರವು ಅಧಿಕ ಒತ್ತಡವನ್ನು ಹೊಂದಿದೆ. ಎತ್ತರಕ್ಕೆ ಹೊಂದಂತೆ ಒತ್ತಡವು ಪ್ರತಿ 900 ಅಡಿಗೆ ಒಂದು ಇಂಚಿನಂತೆ ಕಡಿಮೆಯಾಗುತ್ತಾ ಹೋಗುತ್ತದೆ.

ಅಕ್ಷಾಂಶ (Latitude)

  • ಕೆಳ ಅಕ್ಷಾಂಶದಲ್ಲಿ ಅಧಿಕ ಉಷ್ಣಾಂಶ ದಾಖಲಾಗಿರುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಅದೇ ರೀತಿಯಾಗಿ ಮೇಲಿನ ಅಕ್ಷಾಂಶಗಳಲ್ಲಿ (90° ಅಕ್ಷಾಂಶ) ಕಡಿಮೆ ಉಷ್ಣಾಂಶವಿರುವುದರಿಂದ ಒತ್ತಡವು ಹೆಚ್ಚಾಗಿರುತ್ತದೆ.

ನೀರಾವಿ (Water Vapor)

  • ತೇವಾಂಶಭರಿತ ವಾಯು ಹಗುರಾಗಿದ್ದು, ಕಡಿಮೆ ಒತ್ತಡವನ್ನು ಹೊಂದಿದ್ದು, ತಂಪಾದ ಗಾಳಿಯು ಅಧಿಕ ಒತ್ತಡವನ್ನು ಹೊಂದಿರುತ್ತದೆ.

ಭೂಮಿಯ ಚಲನೆ:

  • ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವುದರಿಂದ ವಾತಾವರಣದ ಒತ್ತಡದಲ್ಲಿ ವ್ಯತ್ಯಾಸವೂ ಉಂಟಾಗುತ್ತದೆ. ನೂಲುವ ಕ್ರಿಯೆಯು ಗಾಳಿಯ ದ್ರವ್ಯರಾಶಿಯ ನೂಲುವಿಕೆಯನ್ನು ಉಂಟುಮಾಡುತ್ತದೆ ಮತ್ತು ಧ್ರುವಗಳ ಬಳಿ ತಂಪಾದ ಗಾಳಿಯು ಕಡಿಮೆ-ಒತ್ತಡದ ಪಟ್ಟಿಗಳನ್ನು ರೂಪಿಸಲು ಕಾರಣವಾಗುತ್ತದೆ. ಇದರ ಜೊತೆಗೆ, ಭೂಮಿಯ ತಿರುಗುವುಕೆಯು ಗಾಳಿಯ ಚಲನೆಯನ್ನು ಅದರ ದಿಕ್ಕಿನಲ್ಲಿ ತಿರುಗಿಸುತ್ತದೆ.

ಒತ್ತಡದ ಪಟ್ಟಿಗಳ ವಿತರಣೆ

ಪ್ರಪಂಚದಲ್ಲಿ ಒಟ್ಟು ಏಳು ಒತ್ತಡದ ಪಟ್ಟಿಗಳಿವೆ
 
  1. ಸಮಭಾಜಕವೃತ್ತದ ಕಡಿಮೆ ಒತ್ತಡದ ಪಟ್ಟಿ / Equatorial low-pressure belt (1 ಬೆಲ್ಟ್)
  2. ಉಪ-ಉಷ್ಣವಲಯದ ಅಧಿಕ ಒತ್ತಡದ ಪಟ್ಟಿಗಳು / Sub-tropical high-pressure belts (2 ಬೆಲ್ಟ್‌ಗಳು)
  3. ಉಪ-ಧ್ರುವೀಯ ಕಡಿಮೆ ಒತ್ತಡದ ಪಟ್ಟಿಗಳು / Sub-polar low-pressure belts (2 ಪಟ್ಟಿಗಳು)
  4. ಧ್ರುವೀಯ ಅಧಿಕ ಒತ್ತಡದ ಪಟ್ಟಿಗಳು / Polar high-pressure belts (2 ಬೆಲ್ಟ್‌ಗಳು)
pressure-belts

1. ಸಮಭಾಜಕವೃತ್ತದ ಕಡಿಮೆ ಒತ್ತಡದ ಪಟ್ಟಿ

  1. ಈ ವಲಯವು 0 ಇಂದ 5° ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ಮಧ್ಯದಲ್ಲಿದೆ.
  2. ವರ್ಷದ ಎಲ್ಲಾ ಕಾಲದಲ್ಲಿ ಸೂರ್ಯನ ನೇರವಾದ ಕಿರಣಗಳು ಈ ಪ್ರದೇಶದಲ್ಲಿ ಬೀಳುತ್ತವೆ.
  3. ಗಾಳಿಯು ಈ ಪ್ರದೇಶದಲ್ಲಿ ಬಿಸಿಯಾಗಿ, ಪ್ರಸರಣ ಹೊಂದಿ ಮೇಲೇರುತ್ತದೆ, ಆದಕಾರಣ ಈ ಪ್ರದೇಶವು ಕಡಿಮೆ ಒತ್ತಡವಾಗಿ ನಿರ್ಮಾಣವಾಗುತ್ತದೆ.
  4. ಇದು ಶಾಂತ ಮತ್ತು ಅತಿ ಕಡಿಮೆ ಗಾಳಿಯನ್ನು ಹೊಂದಿರುತ್ತದೆ. ಆದುದರಿಂದ ಇದನ್ನು ಡಾಲ್ಡ್ರಮ್ (Doldrum) ಅಥವಾ ಸಮಭಾಜಕವೃತ್ತದ ಶಾಂತಪಟ್ಟಿ ಎಂದು ಕರೆಯುವರು.
  5. ಈ ವಲಯದಲ್ಲಿ ವಾಣಿಜ್ಯ ಮಾರುತಗಳು ಸೇರುತ್ತದೆ. ಈ ಪ್ರದೇಶವು ಪರಿಸರಣ ಮಳೆ ಪಡೆಯುತ್ತದೆ.

2. ಉಪ ಉಷ್ಣವಲಯದ ಹೆಚ್ಚು ಒತ್ತಡ ಪಟ್ಟಿ

  1. ಈ ವಲಯವು 25° ಇಂದ 35° ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳಲ್ಲಿ ಕಂಡುಬರುತ್ತದೆ.
  2. ಭೂಮಿಯ ದೈನಂದಿನ ಚಲನೆ ಮತ್ತು ಮೇಲ್ಮುಖವಾಗಿ ಚಲಿಸುವ ಗಾಳಿಯು ಪ್ರಚಲನ ಪ್ರವಾಹದ ರೂಪದಲ್ಲಿ ಕೆಳಗಿಳಿಯುವುದರಿಂದ ಹೆಚ್ಚು ಒತ್ತಡ ನಿರ್ಮಾಣವಾಗುತ್ತದೆ.
  3. ಇಲ್ಲಿ ವಾಣಿಜ್ಯ ಮತ್ತು ಪ್ರತಿವಾಣಿಜ್ಯ ಮಾರುತಗಳು ಉಗಮ ಹೊಂದುತ್ತವೆ.
  4. ಈ ವಲಯವನ್ನು “ಅಶ್ವ ಅಕ್ಷಾಂಶಗಳೆಂದು ಕರೆಯುವರು.
  5. ಗೋಳದಲ್ಲಿ ಎರಡು ಉಪಉಷ್ಣವಲಯದ ಅಧಿಕ ಒತ್ತಡ ಪಟ್ಟಿಗಳಿವೆ.
    • ಉತ್ತರದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ,
    • ದಕ್ಷಿಣದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ
ಅಶ್ವ ಅಕ್ಷಾಂಶಗಳು:
ಅಶ್ವ ಅಕ್ಷಾಂಶಗಳು ಸಾಮಾನ್ಯವಾಗಿ ಉಪಉಷ್ಣವಲಯದ ಹೆಚ್ಚು ಒತ್ತಡ, ಪ್ರದೇಶಗಲ್ಲಿ ಕಂಡುಬರುತ್ತದೆ. ಸ್ಪೇನ್ ದೇಶದ ನೌಕಾಯಾನಿಗಳು, ವೆಸ್ಟ್ ಇಂಡೀಸ್ ದ್ವೀಪಗಳಿಗೆ ಪ್ರಯಾಣಮಾಡುವಾಗ ಈ ಪ್ರದೇಶವು ಶಾಂತಪ್ರದೇಶವಾದ್ದರಿಂದ ಗಾಳಿಯವೇಗ ಕಡಿಮೆಯಾಗಿ ಸಮುದ್ರದಲ್ಲಿ ತಿಂಗಳುಗಟ್ಟಲೆ ಪ್ರಯಾಣ ಸ್ಥಗಿತಗೊಳ್ಳುವುದರಿಂದ ಕುಡಿಯುವ ನೀರಿನ ಕೊರತೆಯುಂಟಾಗುತ್ತದೆ. ಅದನ್ನು ಸಂರಕ್ಷಿಸಿಕೊಳ್ಳಲು ಹಡಗಿನಲ್ಲಿದ್ದ ಕುದುರೆಗಳನ್ನು ಸಮುದ್ರಕ್ಕೆ ತಳ್ಳುತ್ತಿದ್ದರು. ಆದ್ದರಿಂದ ಇದು ‘ಅಶ್ವ ಅಕ್ಷಾಂಶ’ವೆಂದು ಹೆಚ್ಚು ಪ್ರಚಲಿತವಾಯಿತು..

3. ಉಪಧ್ರುವೀಯ ಕಡಿಮೆ ಒತ್ತಡ ಪಟ್ಟಿ

  1. ಈ ವಲಯವು 60° ಯಿಂದ 70° ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ಕಂಡುಬರುತ್ತದೆ.
  2. ಭೂಮಿಯ ದೈನಂದಿನ ಚಲನೆಯ ಪರಿಣಾಮವಾಗಿ ಒಂದು ಕಡಿಮೆ ಒತ್ತಡ ಪಟ್ಟಿ ಸೃಷ್ಟಿಯಾಗಿ ದೊಡ್ಡ ಪ್ರಮಾಣದ ಗಾಳಿಯನ್ನು ಸಮಭಾಜಕವೃತ್ತದ ಕಡೆಗೆ ಬೀಸುವಂತೆ ಪ್ರಭಾವ ಬೀರುತ್ತದೆ.
  3. ಈ ಪ್ರದೇಶವು ಚಳಿಗಾಲದಲ್ಲಿ ಬಿರುಗಾಳಿಯಿಂದ ಕೂಡಿರುತ್ತದೆ.
  4. ಗೋಳದಲ್ಲಿ ಎರಡು ಉಪಧ್ರುವೀಯ ಕಡಿಮೆ ಒತ್ತಡ ಪಟ್ಟಿಗಳಿವೆ. ಅವುಗಳೆಂದರೆ
    • ಉತ್ತರ ಉಪಧ್ರುವೀಯ ಕಡಿಮೆ ಒತ್ತಡ ಪಟ್ಟಿ ಮತ್ತು
    • ದಕ್ಷಿಣ ಉಪಧ್ರುವೀಯ ಕಡಿಮೆ ಒತ್ತಡಪಟ್ಟಿ.

4. ಧ್ರುವೀಯ ಅಧಿಕ ಒತ್ತಡ ಪಟ್ಟಿ

  1. ಎರಡು ಧ್ರುವ ಪ್ರದೇಶಗಳು ವರ್ಷದ ಎಲ್ಲಾ ಕಾಲದಲ್ಲಿ ಕಡಿಮೆ ಉಷ್ಣಾಂಶವನ್ನು ಪಡೆಯುತ್ತಿದ್ದು, ತಂಪಾದ ಗಾಳಿಯು ಧ್ರುವಪ್ರದೇಶಗಳಲ್ಲಿ ಅಧಿಕ ಸಾಂದ್ರತೆಯಿಂದ ಕುಸಿಯುತ್ತಿರುವುದರಿಂದ ಈ ಪ್ರದೇಶವು ಅಧಿಕ ಒತ್ತಡ ಪ್ರದೇಶವಾಗಿ ನಿರ್ಮಾಣವಾಗಿದೆ.
  2. ಈ ಪ್ರದೇಶವು 80° ಇಂದ 90° ಅಕ್ಷಾಂಶದಲ್ಲಿ ಎರಡು ಗೋಳಾರ್ಧಗಳಲ್ಲಿ ಕಂಡು ಬರುತ್ತದೆ.
  3. ಧ್ರುವ ಪ್ರದೇಶಗಳು ಅತಿ ಶೀತ ಹವಾಮಾನವನ್ನು ಹೊಂದಿರುವುದರಿಂದ ಇಲ್ಲಿ ಗಾಳಿಯು ಹೆಚ್ಚು ಸಾಂದ್ರತೆ ಮತ್ತು ಭಾರವಾಗಿರುತ್ತದೆ.
  4. ಗೋಳದಲ್ಲಿ ಎರಡು ಧ್ರುವೀಯ ಅಧಿಕ ಒತ್ತಡ ಪಟ್ಟಿಗಳಿವೆ. ಅವುಗಳೆಂದರೆ
    • ಉತ್ತರ ಧ್ರುವದ ಅಧಿಕ ಒತ್ತಡ ಪಟ್ಟಿ
    • ದಕ್ಷಿಣ ಧ್ರುವದ ಅಧಿಕ ಒತ್ತಡ ಪಟ್ಟಿ.

ಒತ್ತಡ ಪಟ್ಟಿಗಳ ಸ್ಥಳಾಂತರ

  1. ಸಾಮಾನ್ಯವಾಗಿ ಒತ್ತಡದ ವಲಯಗಳು ವರ್ಷದ ಎಲ್ಲಾ ಕಾಲದಲ್ಲೂ ಮೇಲೆ ತಿಳಿಸಿದ ಅಕ್ಷಾಂಶಗಳ ನಡುವೆ ಸ್ಥಿರವಾಗಿ ಉಳಿಯುವುದಿಲ್ಲ. ಭೂಮಿಯ ವಾರ್ಷಿಕ ಚಲನೆಯಲ್ಲಿ ಸೂರ್ಯನ ಲಂಬ ಕಿರಣಗಳು ಋತುಮಾನಗಳೊಡನೆ ಉತ್ತರ ಮತ್ತು ದಕ್ಷಿಣದ ಕಡೆಗೆ ಸ್ಥಳಾಂತರ ಹೊಂದುತ್ತವೆ.
  2. (ಇವು 5° ಉತ್ತರ ಮತ್ತು ದಕ್ಷಿಣಕ್ಕೆ), ನಮ್ಮ ಕಲ್ಪನೆಯಂತೆ ಸೂರ್ಯನ ಲಂಬಕಿರಣಗಳು ವರ್ಷದ ಎಲ್ಲಾ ಅವಧಿಯಲ್ಲಿ ಸಮಭಾಜಕ ವೃತ್ತದ ಮೇಲೆ ಬೀಳುತ್ತವೆ. ಆದರೆ ಇದು ಸಂಭವಿಸುವುದು ವರ್ಷದಲ್ಲಿ ಎರಡು ಋತುವಿನಲ್ಲಿ ಮಾತ್ರ ಸೆಪ್ಟೆಂಬರ್ 23 (ಶರತ್ ಸಂಕ್ರಾಂತಿ) ಮತ್ತು ಮಾರ್ಚ್ 21 (ಮೇಷ ಸಂಕ್ರಾಂತಿ), ಡಿಸೆಂಬರ್ ನಿಂದ ಜೂನ್ ತಿಂಗಳಲ್ಲಿ ಸೂರ್ಯನು ದಕ್ಷಿಣದಿಂದ ಉತ್ತರದ ಕಡೆಗೆ ಚಲಿಸುತ್ತಾನೆ ಹಾಗೂ ಜೂನ್‌ ನಿಂದ ಡಿಸೆಂಬರ್‌ವರೆಗೆ ಸೂರ್ಯನು ದಕ್ಷಿಣದ ಕಡೆಗೆ ಚಲಿಸುತ್ತಾನೆ. ಆದುದರಿಂದ ಒತ್ತಡದ ಪಟ್ಟಿಗಳು ವಾರ್ಷಿಕ ಚಾಲನೆಯನ್ನು ಆಧರಿಸಿ ಸ್ಥಳಾಂತರ ಹೊಂದುತ್ತವೆ.
ಸಮಭಾರ ರೇಖೆಗಳು (Isobars):
ನಕಾಶೆ ಮತ್ತು ಗ್ಲೋಬಿನ ಮೇಲೆ ಒಂದೇ ಪ್ರಮಾಣದ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸಿ ಎಳೆಯುವ ರೇಖೆಗಳಿಗೆ ಸಮಭಾರ ರೇಖೆ ಎಂದು ಕರೆಯುವರು.