ಮಾರುತಗಳು
ಪರಿಚಯ
ಭೂಮಿಯ ಮೇಲ್ಮಗೆ ಸಮಾನಾಂತರವಾಗಿ ಚಲಿಸುವ ವಾಯುವನ್ನು ಮಾರುತಗಳೆಂದು ಕರೆಯುವರು.
ಮಾರುತಗಳು ವಾಯುಮಂಡಲದ ಉಷ್ಣಾಂಶ ಮತ್ತು ಆದ್ರ್ರತೆ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮಾರುತಗಳ ಉಗಮವು ಒತ್ತಡದ ವ್ಯತ್ಯಾಸದಿಂದಾಗಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುವುದು. ಮಾರುತಗಳು ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ.
ಒತ್ತಡದ ಇಳಿಜಾರಿನ ಪ್ರಮಾಣವು ಮಾರುತಗಳು ಬೀಸುವ ದಿಕ್ಕನ್ನು ನಿರ್ಧರಿಸುವುದು.
ಗಾಳಿ ಬೀಸುವ ದಿಕ್ಕನ್ನು ಗುರ್ತಿಸಲು ಬಳಸುವ ಉಪಕರಣವನ್ನು ‘ಪವನ ದಿಕ್ಕೂಚಿ’ (Wind vane) ಎನ್ನುವರು.
ವಾಯುವಿನ ವೇಗವನ್ನು ಅಳೆಯಲು ʼಪವನ ವೇಗ ಮಾಪಕʼ (Anemometer) ಉಪಕರಣವನ್ನು ಉಪಯೋಗಿಸುವರು.
Wind Wane
Anemometer
ಮಾರುತಗಳ ಲಕ್ಷಣಗಳು:
ಒತ್ತಡದ ವ್ಯತ್ಯಾಸ
ಮಾರುತಗಳು ಯಾವಾಗಲು ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ. ಒತ್ತಡದ ಇಳಿಜಾರಿನ ಪ್ರಮಾಣವು ಮಾರುತಗಳ ವೇಗವನ್ನು ನಿಯಂತ್ರಿಸುವುದು. ಒತ್ತಡದ ಇಳಿಜಾರು ಅಧಿಕವಾಗಿದ್ದರೆ ಮಾರುತಗಳ ವೇಗವು ಸಹ ಹೆಚ್ಚಾಗಿರುವುದು. ಒತ್ತಡದ ಇಳಿಜಾರು ಸಾಧಾರಣವಾಗಿದ್ದರೆ ಮಾರುತಗಳ ವೇಗ ಕಡಿಮೆ ಇರುವುದು.
ದೈನಂದಿನ ಚಲನೆ
ಭೂಮಿಯ ದೈನಂದಿನ ಚಲನೆಯ ಪರಿಣಾಮವಾಗಿ ಉತ್ತರಾರ್ಧಗೋಳದಲ್ಲಿ ಮಾರುತಗಳು ತಮ್ಮ ಬಲಕ್ಕೆ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿಗೆ ಅನುಗುಣವಾಗಿ ಬೀಸುತ್ತವೆ. ದಕ್ಷಿಣಾರ್ಧಗೋಳದಲ್ಲಿ ಮಾರುತಗಳು ತಮ್ಮ ಎಡಕ್ಕೆ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿಗೆ ವಿರುದ್ಧವಾಗಿ ಬೀಸುತ್ತವೆ.
ಮಾರುತಗಳ ದಿಕ್ಕು
ಮಾರುತಗಳನ್ನು ಸಾಮಾನ್ಯವಾಗಿ ಅವು ಬೀಸುವ ದಿಕ್ಕಿನ ಆಧಾರದ ಮೇಲೆ ಗುರುತಿಸಲಾಗುವುದು. ಇದರಿಂದಾಗಿ ಭೂಮಿಯ ಮೇಲೆ ಹಲವಾರು ಪ್ರಕಾರದ ಮಾರುತಗಳನ್ನು ಕಾಣಬಹುದು. ಉದಾಹರಣೆಗೆ ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಮಾರುತಗಳು ನೈರುತ್ಯದಿಂದ ಈಶಾನ್ಯ ದಿಕ್ಕಿನ ಕಡೆಗೆ ಬೀಸುತ್ತವೆ ಹಾಗೂ ಸೆಪ್ಟೆಂಬರ್‌ನಿಂದ ಡಿಸೆಂಬರ್ ವರೆಗೆ ಮಾರುತಗಳು ಈಶಾನ್ಯದಿಂದ ನೈರುತ್ಯ ದಿಕ್ಕಿನ ಕಡೆಗೆ ಬೀಸುತ್ತವೆ.
ಮಾರುತಗಳ ವಿಧಗಳು:
ಮಾರುತಗಳ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ: ಉಷ್ಣಾಂಶ ಮತ್ತು ಒತ್ತಡ, ಮಾರುತಗಳ ಉಗಮ, ಸ್ವರೂಪ ಹಾಗೂ ಗುಣ ಲಕ್ಷಣಗಳ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
ನಿರಂತರ ಮಾರುತಗಳು
ನಿಯತಕಾಲಿಕ ಮಾರುತಗಳು
ಸ್ಥಳೀಯ ಮಾರುತಗಳು
1. ನಿರಂತರ ಮಾರುತಗಳು
ಇವುಗಳನ್ನು ನಿತ್ಯ ಮಾರುತಗಳೆಂತಲು ಕರೆಯುವರು. ಇವು ಅಧಿಕ ಒತ್ತಡ ಪಟ್ಟಿಗಳಿಂದ ಕಡಿಮೆ ಒತ್ತಡ ಪಟ್ಟಿಗಳ ಕಡೆಗೆ ನಿಶ್ಚಿತ ದಿಕ್ಕಿನಿಂದ ವರ್ಷದ ಎಲ್ಲಾ ಕಾಲದಲ್ಲೂ ನಿರಂತರವಾಗಿ ಬೀಸುತ್ತವೆ. ಈ ಮಾರುತಗಳು ವಾಯುಗುಣ ಬದಲಾವಣೆ, ಮರುಭೂಮಿಗಳ ಉಗಮ, ನೌಕಾಯಾನದ ಮಾರ್ಗ ಮೊದಲಾದವುಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ನಿರಂತರ ಮಾರುತಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :
ವಾಣಿಜ್ಯ ಮಾರುತಗಳು
ಪ್ರತಿ ವಾಣಿಜ್ಯ ಮಾರುತಗಳು
ಧ್ರುವೀಯ ಮಾರುತಗಳು
ವಾಣಿಜ್ಯ ಮಾರುತಗಳು
ವಾಣಿಜ್ಯ ಮಾರುತಗಳನ್ನು ಉಪಉಷ್ಣವಲಯದ ಪೂರ್ವದ ಮಾರುತಗಳೆಂತಲೂ ಕರೆಯುವರು.
ಇವು ಉಪ ಉಷ್ಣವಲಯದ ಅಧಿಕ ಒತ್ತಡಪಟ್ಟಿಯಿಂದ ಉಗಮಗೊಂಡು ಸಮಭಾಜಕವೃತ್ತದ ಕಡಿಮೆ ಒತ್ತಡ ಪಟ್ಟಿಗಳ ಕಡೆಗೆ ಬೀಸುತ್ತವೆ.
‘ಟ್ರೇಡ್‘ ಎಂಬ ಪದವು ಲ್ಯಾಟಿನ್‌ನ ʼಟ್ರ್ಯಾಡೋ‘ ಎಂಬುದರಿಂದ ಉತ್ಪತ್ತಿ ಹೊಂದಿದ್ದು, ಇದರ ಅರ್ಥ ನಿರ್ಧಿಷ್ಟ ಮಾರ್ಗ ಎಂದಾಗಿದೆ.
ವಾಣಿಜ್ಯ ಮಾರುತಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ
ಈಶಾನ್ಯ ವಾಣಿಜ್ಯ ಮಾರುತಗಳು ಉತ್ತರಾರ್ಧಗೋಳದಲ್ಲಿ ಕಂಡುಬರುತ್ತವೆ. ಇವು ಈಶಾನ್ಯದಿಂದ ನೈರುತ್ಯ ದಿಕ್ಕಿನ ಕಡೆಗೆ ಬೀಸುತ್ತವೆ.
ಆತ್ಮೀಯ ವಾಣಿಜ್ಯ ಮಾರುತಗಳು ದಕ್ಷಿಣಾರ್ಧಗೋಳದಲ್ಲಿ ಕಂಡುಬರುತ್ತವೆ. ಇವು ಆಗ್ನಿಯದಿಂದ ವಾಯುವ್ಯ ದಿಕ್ಕಿನ ಕಡೆಗೆ ಬೀಸುತ್ತವೆ.
ವಾಣಿಜ್ಯ ಮಾರುತಗಳನ್ನು ಪೂರ್ವ ಮಾರುತಗಳೆಂದೂ ಕರೆಯುವರು.
ಉತ್ತರಾರ್ಧ ಗೋಳದ ಈಶಾನ್ಯ ವಾಣಿಜ್ಯ ಮಾರುತಗಳು, ದಕ್ಷಿಣಾರ್ಧ ಗೋಳದ ಆತ್ಮೀಯ ವಾಣಿಜ್ಯ ಮಾರುತಗಳು ಸಮಭಾಜಕ ವೃತ ವಲಯದಲ್ಲಿ ಸಂಧಿಸುತ್ತವೆ. ಆದ್ದರಿಂದ ಈ ಪ್ರದೇಶವನ್ನು ವಾಣಿಜ್ಯ ಮಾರುತಗಳ ʼಅಂತರೋಷ್ಣವಲಯದ ಅಭಿಸರಣ ವಲಯ‘ (ಇಂಟರ್ ಟ್ರಾಫಿಕಲ್ ಕನ್ವರ್ಜಂಟ್ ಜೋನ್ – IT C Z) ಎಂದು ಕರೆಯುವರು.
ಈ ವಲಯವು ಕಡಿಮೆ ಒತ್ತಡ, ಅನಿಶ್ಚಿತ ಮಾರುತಗಳು ಮತ್ತು ಶಾಂತ ಪರಿಸ್ಥಿತಿ ಹಾಗೂ ವಾಣಿಜ್ಯ ಮಾರುತಗಳ ಸಂಗಮ ಮುಂತಾದ ವಿವಿಧ ಗುಣಲಕ್ಷಣಗಳನ್ನು ಹೊಂದಿದೆ.
ಪತಿ ವಾಣಿಜ್ಯ ಮಾರುತಗಳು ಅಥವಾ ಪಶ್ಚಿಮ ಮಾರುತಗಳು
- ಈ ಮಾರುತಗಳು ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿಯಿಂದ ಉಗಮಗೊಂಡು ಉಪದೃವೀಯ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬೀಸುತ್ತವೆ.
- ಇವು ಉತ್ತಾರಾರ್ಧಗೋಳದಲ್ಲಿ ನೈರುತ್ಯದಿಂದ ಈಶಾನ್ಯದ ಕಡೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ ವಾಯುವ್ಯದಿಂದ ಆಗ್ನಿಯದ ಕಡೆಗೆ ಬೀಸುತ್ತವೆ. ಆದುದರಿಂದ ಇವುಗಳನ್ನು ಪಶ್ಚಿಮ ಮಾರುತಗಳೆಂದು ಕರೆಯುವರು.
- ಈ ಮಾರುತಗಳು ವಾಣಿಜ್ಯ ಮಾರುತಗಳಿಗೆ ವಿರುದ್ಧ ದಿಕ್ಕಿನಲ್ಲಿ ಬೀಸುವುವು. ಆದುದರಿಂದ ಇವುಗಳನ್ನು ಪ್ರತಿವಾಣಿಜ್ಯ ಮಾರುತಗಳೆನ್ನುವರು.
- ಉತ್ತರಾರ್ಧಗೋಳವು ವೈವಿದ್ಯಮಯ ಭೂ ಸ್ವರೂಪಗಳಿಂದ ಕೂಡಿರುವ ವಿಶಾಲ ಭೂ ಭಾಗವನ್ನು ಹೊಂದಿರುವುದು. ಇದರಿಂದ ಪ್ರತಿವಾಣಿಜ್ಯ ಮಾರುತಗಳಿಗೆ ಅಪಾರ ಪ್ರಮಾಣದ ಅಡಚಣೆ ಉಂಟಾಗುತ್ತದೆ. ಆದರೆ ಹೆಚ್ಚು ಜಲರಾಶಿಗಳಿಂದ ಕೂಡಿದ ದಕ್ಷಿಣಾರ್ಧಗೋಳದಲ್ಲಿ ಇವು ನಿರಂತರವಾಗಿ ಹೆಚ್ಚು ವೇಗದಿಂದ ಬೀಸುತ್ತವೆ.
- ಈ ಮಾರುತಗಳು ದಕ್ಷಿಣಾರ್ಧಗೋಳದಲ್ಲಿ ನೌಕಯಾನಕ್ಕೆ ಅಡಚಣೆಯನ್ನುಂಟು ಮಾಡುತ್ತವೆ.
- ದಕ್ಷಿಣಾರ್ಧಗೋಳದಲ್ಲಿನ ಪ್ರಮುಖ ಪಶ್ಚಿಮ ಮಾರುತಗಳೆಂದರೆ:
- ನಲ್ವತ್ತರ ಅಬ್ಬರ ಗಾಳಿಯು 40 ದಕ್ಷಿಣ ಆಕ್ಷಾಂಶಗಳಲ್ಲಿ ಕಂಡುಬರುವುದು, ಕಂಡುಬರುವುದು.
- ಐವತ್ತರ ಉಗ್ರ ಗಾಳಿಯು 50 ದಕ್ಷಿಣ ಆಕ್ಷಾಂಶಗಳಲ್ಲಿ
- ಅರವತ್ತರ ಅರಚುವ ಗಾಳಿಯು 60 ದಕ್ಷಿಣ ಅಕ್ಷಾಂಶಗಳಲ್ಲಿ ಕಂಡುಬರುವುದು.
ದೃವೀಯ ಮಾರುತಗಳು
ಇವುಗಳು ಶೀತ ಮಾರುತಗಳು, ಈ ಮಾರುತಗಳು ದೃವೀಯ ಅಧಿಕ ಒತ್ತಡ ಪ್ರದೇಶದಿಂದ ಉಪ ದೃವೀಯ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ.
ಇವು ಇತರ ಮಾರುತಗಳಿಗಿಂತ ವರ್ಷವೆಲ್ಲಾ ನಿರಂತರವಾಗಿ ಬೀಸುತ್ತವೆ.
ಚಳಿಗಾಲದಲ್ಲಿ ಹೆಚ್ಚು ಪ್ರಭಲವಾಗಿರುವ ಈ ಮಾರುತಗಳು ಬೇಸಿಗೆಯಲ್ಲಿ ಕ್ಷೀಣಗೊಳ್ಳುತ್ತವೆ.
ಇವು ಉತ್ತರಾರ್ಧಗೋಳದಲ್ಲಿ ಈಶಾನ್ಯದಿಂದ ನೈರುತ್ಯದ ಕಡೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ ಆಗ್ನಿಯದಿಂದ ವಾಯುವ್ಯದ ಕಡೆಗೆ ಬೀಸುವವು. ಆದುದರಿಂದ ಇವುಗಳನ್ನು ದೃವೀಯ ಪೂರ್ವದ ಮಾರುತಗಳೆಂದು ಕರೆಯುವರು.
2. ನಿಯತಕಾಲಿಕ ಅಥವಾ ಋತುಕಾಲಿಕ ಮಾರುತಗಳು
ವಿವಿಧ ಋತುಮಾನಗಳಲ್ಲಿ ಪರಸ್ಪರ ತದ್ವಿರುದ್ಧ ದಿಕ್ಕಿನಿಂದ ಬೀಸುವ ಮಾರುತಗಳನ್ನು ನಿಯತಕಾಲಿಕ ಅಥವಾ ಋತುಕಾಲಿಕ ಮಾರುತಗಳೆಂದು ಕರೆಯುವರು.
ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾಹರಣೆಯಾಗಿವೆ.
ಈ ಮಾರುತಗಳು ವಿವಿಧ ಋತುಗಳಲ್ಲಿ ಪರಸ್ಪರ ತದ್ವಿರುದ್ಧ ದಿಕ್ಕಿನಿಂದ ಬೀಸಲು ಭೂಮಿ ಮತ್ತು ಜಲಭಾಗಗಳು ಹೊಂದಿರುವ ಉಷ್ಣಾಂಶ ಮತ್ತು ಒತ್ತಡ ಪರಿಸ್ಥಿತಿಗಳ ವ್ಯತ್ಯಾಸವೇ ಮುಖ್ಯ ಕಾರಣ, ಋತುಕಾಲಿಕ ಮಾರುತಗಳು ಪ್ರಮುಖವಾಗಿ ಉಷ್ಣವಲಯದ ಪ್ರದೇಶದಲ್ಲಿ ಕಂಡುಬರುತ್ತವೆ, ಕೆಲವು ವೇಳೆ ಸಮಶೀತೋಷ್ಣ ಪ್ರದೇಶದವರೆಗೂ ಮುಂದುವರಿಯುತ್ತವೆ. ಇದಕ್ಕೆ ಭೂ ಮತ್ತು ಜಲಭಾಗಗಳಲ್ಲಿನ ಉಷ್ಣಾಂಶದ ವ್ಯತ್ಯಾಸವೇ ಪ್ರಮುಖ ಕಾರಣ.
ಭಾರತದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ನೈರುತ್ಯ ದಿಕ್ಕಿನಿಂದ ಈಶಾನ್ಯದ ದಿಕ್ಕಿಗೆ ಜೂನ್ ತಿಂಗಳಿಂದ ಸೆಪ್ಟೆ೦ಬರ್‌ವರೆಗೆ ಬೀಸುತ್ತವೆ, ನಂತರ ಈಶಾನ್ಯ ಮಾನ್ಸೂನ್ ಮಾರುತಗಳು ಸೆಪ್ಟೆಂಬರ್ ಅಂತ್ಯದಿಂದ ಡಿಸೆಂಬರ್ ಮಧ್ಯಭಾಗದವರೆಗೆ ಈಶಾನ್ಯದಿಂದ ನೈರುತ್ಯದ ದಿಕ್ಕಿಗೆ ಬೀಸುತ್ತವೆ. ಇದಕ್ಕೆ ಭೂಮಿ ಮತ್ತು ಜಲಭಾಗಗಳು ಹೊಂದಿರುವ ಉಷ್ಣಾಂಶ ಮತ್ತು ಒತ್ತಡದ ವ್ಯತ್ಯಾಸವೆ ಕಾರಣವಾಗಿವೆ.
3. ಸ್ಥಳೀಯ ಮಾರುತಗಳು
ಭೂಮಿಯ ಮೇಲೆ ವಿಸ್ತಾರವಾದ ಪ್ರದೇಶಗಳಲ್ಲಿ ಬೀಸುವ ನಿರಂತರ ಮತ್ತು ನಿಯತಕಾಲಿಕ ಮಾರುತಗಳು, ಸ್ಥಳೀಯ ಉಷ್ಣಾಂಶ ಒತ್ತಡಗಳ ವ್ಯತ್ಯಾಸಗಳ ಪರಿಣಾಮವಾಗಿ ಉಂಟಾಗುತ್ತದೆ. ಇಂತಹ ಮಾರುತಗಳಿಗೆ ಸ್ಥಳೀಯ ಮಾರುತಗಳು ಎನ್ನುವರು.
ಪ್ರಪಂಚದ ವಿವಿಧ ಭಾಗಗಳಲ್ಲಿ ಹಲವಾರು ಬಗೆಯ ಸ್ಥಳೀಯ ಮಾರುತಗಳು ಕಂಡುಬರುತ್ತವೆ, ಅವುಗಳಲ್ಲಿ ಮುಖ್ಯವಾದವುಗಳೆಂದರೆ
ಭೂ ಮತ್ತು ಸಮುದ್ರ ಗಾಳಿ
ಪರ್ವತ ಮತ್ತು ಕಣಿವೆ ಗಾಳಿ
ಭೂ ಮತ್ತು ಸಮುದ್ರ ಗಾಳಿ (Land and Sea breeze)
ಇವು ತೀರ ಪ್ರದೇಶಗಳಲ್ಲಿ ಕಂಡುಬರುವ ಮುಖ್ಯ ಸ್ಥಳೀಯ ಮಾರುತಗಳಾಗಿವೆ. ತೀರ ಪ್ರದೇಶದಲ್ಲಿ ಹಗಲು ಮತ್ತು ರಾತ್ರಿಗಳಲ್ಲಿ ಭೂಮಿ ಮತ್ತು ಜಲಭಾಗಗಳಿಂದ ತದ್ವಿರುದ್ಧ ದಿಕ್ಕಿನಿಂದ ಬೀಸುವ ಮಾರುತಗಳನ್ನು ಭೂ ಮತ್ತು ಸಮುದ್ರ ಗಾಳಿಗಳೆಂದು ಕರೆಯುವರು. ಇವುಗಳು ಸಮುದ್ರತೀರದಲ್ಲಿ ಕಂಡುಬರುವ ಪ್ರಮುಖ ಸ್ಥಳೀಯ ಮಾರುತಗಳಾಗಿವೆ.
ಸಮುದ್ರ ಗಾಳಿ
ಹಗಲಿನ ವೇಳೆಯಲ್ಲಿ ಭೂ ಪ್ರದೇಶವು ಬಹುಬೇಗ ಉಷ್ಣಾಂಶವನ್ನು ಪಡೆದು ಅದು ಕಡಿಮೆ ಒತ್ತಡ ಪ್ರದೇಶವಾಗುವುದು. ಆದರೆ ಜಲಭಾಗವು ಇನ್ನೂ ತಂಪಾಗಿದ್ದು ಹೆಚ್ಚು ಒತ್ತಡವನ್ನು ಹೊಂದಿರುವುದು. ಇದರಿಂದ ಮಾರುತಗಳು ನಿಧಾನವಾಗಿ ಜಲಭಾಗಗಳಿಂದ ಭೂಮಿಯ ಕಡೆಗೆ ಬೀಸುತ್ತವೆ. ಇವುಗಳನ್ನು ʼಸಮುದ್ರ ಗಾಳಿʼ ಎಂದು ಕರೆಯುವರು. ಇವು ಹಗಲಿನ ಅವಧಿಯಲ್ಲಿ ಮಾತ್ರ ಕಂಡುಬರುತ್ತವೆ.
ಭೂ ಗಾಳಿ
ರಾತ್ರಿಯ ವೇಳೆಯಲ್ಲಿ ಭೂ ಭಾಗಗಳು ಬಹುಬೇಗ ಉಷ್ಣಾಂಶವನ್ನು ಕಳೆದುಕೊಂಡು ತಂಪಾಗುತ್ತವೆ ಇದರಿಂದ ಇವುಗಳಲ್ಲಿ ಒತ್ತಡವು ಹೆಚ್ಚಾಗಿರುವುದು. ಆದರೆ ಜಲಭಾಗಗಳಲ್ಲಿ ಇನ್ನೂ ಉಷ್ಣಾಂಶವು ಹೆಚ್ಚಾಗಿದ್ದು ಒತ್ತಡವು ಕಡಿಮೆಯಿರುವುದು. ಇದರಿಂದ ಮಾರುತಗಳು ಭೂಭಾಗಗಳಿಂದ ಸಾಗರದ ಕಡೆಗೆ ಬೀಸುತ್ತವೆ. ಇವುಗಳನ್ನು ʼಭೂ ಗಾಳಿʼ ಎಂದೂ ಕರೆಯುವರು.
ಪರ್ವತ ಮತ್ತು ಕಣಿವೆ ಗಾಳಿ (Mountain and Valley breeze):
ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಸ್ಥಳೀಯ ಮಾರುತಗಳಲ್ಲಿ ಪರ್ವತ ಮತ್ತು ಕಣಿವೆ ಗಾಳಿ ಅತಿ ಮುಖ್ಯವಾದವು.
ಪರ್ವತಗಾಳಿ
ರಾತ್ರಿಯ ವೇಳೆಯಲ್ಲಿ ಹೆಚ್ಚು ಎತ್ತರದವರೆಗೆ ಚಾಚಿರುವ ಪರ್ವತ ಶಿಖರಗಳು ಬಹುಬೇಗ ತಂಪಾಗುತ್ತವೆ. ಇದರಿಂದ ಅವುಗಳಲ್ಲಿ ಒತ್ತಡವು ಹೆಚ್ಚಾಗಿರುವುದು, ಇದಕ್ಕೆ ವಿರುದ್ಧವಾಗಿ ಕಣಿವೆಗಳಲ್ಲಿ ಇನ್ನೂ ಹೆಚ್ಚು ಉಷ್ಣಾಂಶವಿದ್ದು ಒತ್ತಡವು ಕಡಿಮೆ, ಇದರಿಂದ ಶಿಖರ ಭಾಗದಿಂದ ಗಾಳಿಯು ನಿಧಾನವಾಗಿ ಇಳಿಜಾರನ್ನು ಅನುಸರಿಸಿ ಕಣಿವೆಗಳ ಕಡೆಗೆ ಕೆಳಗಿಳಿಯುವುದು, ಇವುಗಳನ್ನು ‘ಪರ್ವತಗಾಳಿ‘ ಎಂದು ಕರೆಯುವರು.
ಕಣಿವೆ ಗಾಳಿ
ಮುಂಜಾನೆಯಲ್ಲಿ ಸೂರ್ಯನ ಕಿರಣಗಳು ಶಿಖರಗಳು ಮತ್ತು ಅವುಗಳ ಇಳಿಜಾರಿನ ಮೇಲೆ ಬೀಳುತ್ತವೆ. ಇದರಿಂದ ಅವುಗಳು ಬಿಸಿಯಾಗಿ, ಅಲ್ಲಿನ ಗಾಳಿಯು ಕ್ರಮೇಣ ಮೇಲೇರುವುದರಿಂದ ಅಲ್ಲಿ ಒತ್ತಡವು. ಕಡಿಮೆಯಾಗುವುದು. ಆದರೆ ತಗ್ಗಾದ ಕಣಿವೆಗಳಲ್ಲಿ ಒತ್ತಡವು ಹೆಚ್ಚಾಗಿದ್ದು ಅಲ್ಲಿಂದ ಗಾಳಿಯು ನಿಧಾನವಾಗಿ ಶಿಖರಗಳ ಕಡೆಗೆ ಅನುಸರಿಸಿ ಮೇಲೇರುವುದು, ಇವುಗಳನ್ನು ‘ಕಣಿವೆ ಗಾಳಿ’ ಎಂದು (Valley breezes) ಕರೆಯುವರು.
ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುವ ಇತರ ಪ್ರಮುಖ ಸ್ಥಳೀಯ ಮಾರುತಗಳು:
ಲೂ (ಭಾರತ),
ಆಂಧಿ (ಭಾರತ),
ಬ್ರಿಕ್‌ಫೀಲ್ಡರ್ (ಆಸ್ಟ್ರೇಲಿಯಾ),
ಬ್ಲಿಜಾರ್ಡ (ಉನ್ನತ ಅಕ್ಷಾಂಶಗಳು),
ಸಿರೊಕೊ (ಸಹಾರಾ ಮರುಭೂಮಿ),
ಹರ್ಮಟ್ಟನ್ (ಪಶ್ಚಿಮ ಆಫ್ರಿಕಾ),
ಫೋಹ್ನ್ (ಉತ್ತರ ಆಲ್ಪ್ಸ್),
ಮಿಸ್ಟ್ರಲ್ (ಫ್ರಾನ್ಸ್),
ಚಿನೂಕ್ (USA), ಇತ್ಯಾದಿ.